ಕೋಪರ್‍ನಿಶಿಯ
ಅರಿಕೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯಜಾತಿ. ಇದರಲ್ಲಿ ಕೋ.ಅಸ್ಟ್ರಾಲಿಸ್ ಮತ್ತು ಕೋ.ಸೆರಿಫೆರ ಎಂಬ ಎರಡು ಮುಖ್ಯ ಪ್ರಭೇದಗಳಿವೆ. ಮೊದಲನೆಯದು ಸುಮಾರು 70' ಎತ್ತರಕ್ಕೂ ಎರಡನೆಯದು ಸುಮಾರು 40' ಎತ್ತರಕ್ಕೂ ಬೆಳೆಯುತ್ತವೆ. ಎರಡು ಬಗೆಯ ಮರಗಳಲ್ಲೂ ಕಾಂಡದ ತುದಿಯಲ್ಲಿ ಕಿರೀಟದಾಕಾರದಲ್ಲಿ ಜೋಡಣೆಗೊಂಡ ಎಲೆಗಳಿವೆ. ಒಂದೊಂದು ಎಲೆಯೂ ಹಸ್ತಾಕಾರದಲ್ಲಿದೆ. ಅದಕ್ಕೆ ಸುಮಾರು 3' ಉದ್ದದ ತೊಟ್ಟು ಮತ್ತು 3' ಉದ್ದದ ತೊಟ್ಟು ಮತ್ತು 3' ಉದ್ದದ ಗರಿಭಾಗ ಬೀಸಣಿಗೆಯಂತೆ ಅಗಲವಾಗಿ ಹರಡಿಕೊಂಡಿದ್ದು ನಸುಹಸಿರು ಬಣ್ಣದ 50 ಬಿಡಿ ಗರಿಗಳನ್ನು ಒಳಗೊಂಡಿದೆ. ಹೂಗೊಂಚಲು ತಾಳಗುಚ್ಛ ಮಾದರಿಯದು. ಒಂದೊಂದು ಮರದಿಂದಲೂ ಹಲವಾರು ಹೂಗೊಂಚಲುಗಳು ಹುಟ್ಟುತ್ತವೆ. ಹಣ್ಣುಗಳು ಒಂದೇ ಬೀಜವುಳ್ಳ ಬೆರಿ ಮಾದರಿಯವು. ಇವುಗಳ ಆಕಾರ ಗುಂಡು; ಬಣ್ಣ ಕಂದು.

ಅಮೆರಿಕದ ಉಷ್ಣಪ್ರದೇಶವಾಸಿಯಾದ ಕೋಪರ್‍ನಿಶಿಯ ಬ್ರಜಿóಲ್ ದೇಶದಲ್ಲಿ ವಾಣಿಜ್ಯ ಪ್ರಾಮುಖ್ಯವನ್ನು ಪಡೆದಿದೆ. ಇದರ ಎಲೆಗಳ ಮೇಲಿರುವ ಮೇಣವನ್ನು ನೆಲ, ಮೇಜು ಮತ್ತು ಇತರ ಮರಮಟ್ಟುಗಳಿಗೆ ಹೊಳಪಾದ ಬಣ್ಣ ಕೊಡಬಹುದಾದ ಪಾಲಿಷ್ ತಯಾರುಮಾಡಲು ಉಪಯೋಗಿಸುತ್ತಾರೆ. ಇದರಿಂದ ಕಾರ್ಬನ್ ಕಾಗದ, ಮೇಣದ ಬತ್ತಿ, ಲಿಪ್‍ಸ್ಟಿಕ್ ಮುಂತಾದುವನ್ನೂ ಮಾಡುತ್ತಾರೆ. ಉತ್ತರಬ್ರಜಿóಲ್ ದೇಶದ ಕಾರ್ನುಬೆರಿಯ ಎಂಬ ಬುಡಕಟ್ಟಿನ ಜನ ಈ ಮರದಿಂದ ಮೇಣವನ್ನು ತೆಗೆಯುವ ಕೆಲಸವನ್ನು ಮುಖ್ಯ ಕಸಬಾಗಿ ಅವಲಂಬಿಸಿದ್ದಾರೆ. ಎಲೆಗಳಿಂದ ಟೋಪಿ ಮಾಡುವುದುಂಟು. ಕಾಂಡವನ್ನು ಮನೆ ಕಟ್ಟುವ ಸಾಧನವನ್ನಾಗಿ ಬಳಸುತ್ತಾರೆ.

ಕೋಪರ್‍ನಿಶಿಯ ಸಸ್ಯಗಳನ್ನು ಬೀಜಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಬೀಜಗಳು ಬಿತ್ತಿದ ಸುಮಾರು ಎರಡು ತಿಂಗಳಿಗೆ ಮೊಳೆಯುತ್ತವೆ. ಸಸಿಗಳು ಬಹಳ ನಿಧಾನವಾಗಿ ಬೆಳೆಯುವ ಗುಣದವು.  		 (ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ